|
|
|
ಶ್ರೀಗಂಧ ಸ್ವಾಸ್ತ್ಯ ಕಾರ್ಯಕ್ರಮ, ಹಿರಿಯಬ್ಬೆ
|
| |
ಕಳೆದ ಶನಿವಾರ, 31 ಜನವರಿ 2026, ಶ್ರೀಗಂಧ ಫೌಂಡೇಶನ್ನಿಂದ ಹರಿಯಬ್ಬೆ, ಹಿರಿಯೂರು ತಾಲೂಕು, ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ (ಬಾಲಕರು ಮತ್ತು ಬಾಲಕಿಯರಿಗೆ) ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮಹತ್ವ, ಸಮರ್ಪಕ ಪೌಷ್ಟಿಕ ಆಹಾರ, ಹಾಗೂ ಆರೋಗ್ಯಕರ ಜೀವನಶೈಲಿ ಅಭ್ಯಾಸಗಳ ಬಗ್ಗೆ ಗಮನ ಹರಿಸಲಾಯಿತು. ಮಕ್ಕಳಿಗೆ ಏಕಾಗ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಧ್ಯಾನದ ಮಹತ್ವವನ್ನು ತಿಳಿಸಿ, ಎಲ್ಲರಿಂದ ಧ್ಯಾನವನ್ನು ಕೂಡ ಮಾಡಿಸಲಾಯಿತು.
ಪ್ರೌಢ ಶಾಲೆಯ ಮತ್ತು ಪದವಿ ಪೂರ್ವ ಕಾಲೇಜಿನ ಹೆಣ್ಣು ಮಕ್ಕಳಿಗೆ ಮುಟ್ಟಿನ ಸ್ವಚ್ಛತೆ (Menstrual Hygiene) ಕುರಿತು ವಿಶೇಷ ಒತ್ತು ನೀಡಲಾಗಿದ್ದು, ಪ್ರೌಢಾವಸ್ಥೆಯಲ್ಲಿ ಸಂಭವಿಸುವ ದೈಹಿಕ ಬದಲಾವಣೆಗಳು, ಸ್ವಚ್ಛವಾದ ಸ್ಯಾನಿಟರಿ ಉತ್ಪನ್ನಗಳನ್ನು ಬಳಸುವ ಅಗತ್ಯ, ಹಾಗೂ ಸೋಂಕುಗಳನ್ನು ತಪ್ಪಿಸಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ವೈದ್ಯರು ವಿವರಿಸಿದರು. ಈ ಕಾರ್ಯಾಗಾರವು ಮುಟ್ಟಿನ ಬಗ್ಗೆ ಸಾಮಾನ್ಯ ತಪ್ಪು ಕಲ್ಪನೆಗಳನ್ನು ನಿವಾರಿಸಿ, ಗೌರವಪೂರ್ಣ ವಾತಾವರಣದಲ್ಲಿ ಮುಕ್ತ ಚರ್ಚೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿತ್ತು. ಈ ಭೇಟಿ ಮಾಹಿತಿಪೂರ್ಣವಾಗಿದ್ದು, ವಿದ್ಯಾರ್ಥಿಗಳಿಗೆ ಸಮಗ್ರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಅಗತ್ಯವಾದ ಆರೋಗ್ಯ ಅಭ್ಯಾಸಗಳ ಬಗ್ಗೆ ಅರಿವು ಮೂಡಿಸಿತು.
ಇದಲ್ಲದೆ, ಪ್ರೌಢಶಾಲೆಯ ಬಾಲಕಿಯರಿಗೆ ಸುಮಾರು Rs.30,000 ರೂಪಾಯಿ ಬೆಲೆ ಬಾಳುವ Ladli ಮರುಬಳಕೆ ಮಾಡಬಹುದಾದ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಿ, ಆರೋಗ್ಯಕರ ಮತ್ತು ಪರಿಸರ ಸ್ನೇಹಿ ಮರುಬಳಕೆ ಉತ್ಪನ್ನಗಳ ಬಳಕೆಗೆ ಅವರನ್ನು ಪ್ರೋತ್ಸಾಹಿಸಲಾಯಿತು.
ಸಮಾಜ ಸೇವೆಗಾಗಿ ನಿಸ್ವಾರ್ಥವಾಗಿ ಕೈಜೋಡಿಸಿದ ಡಾಕ್ಟರ್ ರಶ್ಮಿ ಪ್ರಶಾಂತ್ ಪತಂಗೆ ಅವರ ಸೇವೆಯನ್ನು ಶ್ರೀಗಂಧ ಫೌಂಡೇಶನ್ ಹೆಮ್ಮೆಯಿಂದ ಸ್ಮರಿಸುತ್ತದೆ. ಹಾಗೆಯೇ ವೈದ್ಯರಿಗೇ ತಿಳಿಯದಂತೆ ರೂಪಾಯಿ 2,000 ಗೌರವ ಧನ ನೀಡಿದ ಶಾಲೆಯ ಶಿಕ್ಷಕರಿಗೆ ವಂದನೆಗಳು. ಹಾಗೆಯೇ ಆ ಹಣವನ್ನು ಶ್ರೀಗಂಧ ಫೌಂಡೇಶನ್ ಗೆ ದೇಣಿಗೆ ನೀಡಿದ ವೈದ್ಯರಿಗೂ ನಮನಗಳು. ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ವೈದ್ಯರು, ಶ್ರೀಗಂಧ ಯೋಧರು, ಶಿಕ್ಷಕ / ಶಿಕ್ಷಕಿಯರು ಮತ್ತು ಹರಿಯಬ್ಬೆಯ ಗ್ರಾಮಸ್ಥರಿಗೆ ಹೃತ್ಪೂರ್ವಕ ಧನ್ಯವಾದಗಳು.
|
| |
|
| |
|
|
|
|
|
|
|
|
|
|