|
|
|
ಸ್ವಾಸ್ಥ್ಯ ಕಾರ್ಯಕ್ರಮ 2025 - 20 ಡಿಸೆಂಬರ್ 2025
|
| |
ಶನಿವಾರ, 20 ಡಿಸೆಂಬರ್ 2025, ಶ್ರೀಗಂಧ ಫೌಂಡೇಶನ್ ವತಿಯಿಂದ ಶ್ರೀಗಂಧ ಸ್ವಾಸ್ಥ್ಯ ಕಾರ್ಯಕ್ರಮವನ್ನು ಚಿತ್ರದುರ್ಗ ಜಿಲ್ಲೆಯ, ಹೊಸದುರ್ಗ ತಾಲ್ಲೂಕಿನ, ಜಾನಕಲ್ ನಲ್ಲಿರುವ ಶ್ರೀ ಶಂಕರೇಶ್ವರ ಗ್ರಾಮೀಣ ಪ್ರೌಢ ಶಾಲೆ ಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಉದ್ದೇಶವು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸುವುದು ಹಾಗೂ ಸಮಗ್ರ ಆರೋಗ್ಯದ ಅರಿವು ಮೂಡಿಸುವುದಾಗಿತ್ತು. ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಜಾಗೃತಿ ಅಭಿಯಾನ ಹಾಗೂ ಪರಿಸರ ಸ್ನೇಹಿ, ಮರುಬಳಕೆ ಮಾಡಬಹುದಾದ ಸ್ಯಾನಿಟರಿ ಪ್ಯಾಡ್‌ಗಳ ವಿತರಣೆ ನಡೆಯಿತು.ಈ ವಿನೂತನ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಹಿತೈಷಿಗಳು, ಶ್ರೀಗಂಧ ಯೋಧರಾದ ನಮ್ಮ ದಾವಣಗೆರೆಯಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಶ್ರೀಮತಿ ಡಾ. ಸುಧಾ (ಮಕ್ಕಳ ತಜ್ಞೆ) ಅವರು ಖುದ್ದಾಗಿ ಹಾಜರಿದ್ದು ಮಕ್ಕಳ ಜೊತೆ ದೀರ್ಘ ಸಮಯ ಕಳೆದು ಸಮಾಲೋಚನೆ ನಡೆಸಿ, ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿ, ಮಕ್ಕಳ ಆರೋಗ್ಯ ಪರೀಕ್ಷಿಸಿ, ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.
ಹದಿಹರೆಯದ ಬಾಲಕಿಯರಿಗೆ, ವಿಶೇಷವಾಗಿ ಮುಟ್ಟಿನ ಬಗ್ಗೆ ಜಾಗೃತಿಯನ್ನು ನೀಡಿ, ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ಈ ಕಾರ್ಯಗಾರವು ಸಾಮಾನ್ಯ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ಮುಕ್ತ ಚರ್ಚೆಗೆ ಅವಕಾಶ ನೀಡಿ, ವಯೋಚಿತ ಹಾಗೂ ಸಂವೇದನಾಶೀಲ ರೀತಿಯಲ್ಲಿ ಸರಿಯಾದ ಮಾಹಿತಿಯನ್ನು ನೀಡಲು ಸಹಾಯ ಮಾಡಿತು.
ಅಲ್ಲದೆ, ಪರಿಸರ ಸ್ನೇಹಿ ಮರುಬಳಕೆ ಮಾಡಬಹುದಾದ ಸ್ಯಾನಿಟರಿ ಉತ್ಪನ್ನಗಳ ಸುರಕ್ಷಿತ ಬಳಕೆ ಮತ್ತು ಸಂರಕ್ಷಣೆ ಕುರಿತು ಬಾಲಕಿಯರಿಗೆ ಮಾಹಿತಿ ನೀಡಲಾಗಿದ್ದು, ಇದರಿಂದ ಅವರಲ್ಲಿ ಆತ್ಮವಿಶ್ವಾಸ ಮತ್ತು ಗೌರವಭಾವ ಹೆಚ್ಚಾಯಿತು.ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ಈ ಉಪಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಿ, ಶ್ರೀಗಂಧ ಫೌಂಡೇಶನ್ನಿನ ಪ್ರಯತ್ನಗಳನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು, ಕಾರ್ಯಕ್ರಮವು ಪರಿಣಾಮಕಾರಿಯಾಗಿ ಹಾಗೂ ಯಶಸ್ವಿಯಾಗಿ ನಡೆಯಲು ಕಾರಣವಾಯಿತು.ನಮ್ಮ ಪ್ರೀತಿಪಾತ್ರ ವೈದ್ಯರು ಎಲ್ಲಾ ವಿದ್ಯಾರ್ಥಿಗಳ ವೈಯಕ್ತಿಕ ಪ್ರಶ್ನೆಗಳಿಗೆ ಸಹೃದಯದಿಂದ ಉತ್ತರಿಸಿ, ಅವರ ಸಂಶಯಗಳನ್ನು ನಿವಾರಿಸಿದರು.ಈ ಶ್ರೀಗಂಧ ಸ್ವಾಸ್ಥ್ಯ ಕಾರ್ಯಕ್ರಮದಿಂದ ಮಹಿಳಾ ಶಿಕ್ಷಕರು, ಮಹಿಳಾ ಸಿಬ್ಬಂದಿ ಹಾಗೂ ಅನೇಕ ಪೋಷಕರು (ತಾಯಂದಿರು) ಕೂಡ ಲಾಭ ಪಡೆದುಕೊಂಡರು.
ಈ ಮಹತ್ವದ ಸಮಾಜಮುಖಿ ಕಾರ್ಯಕ್ಕೆ ಬೆಂಬಲ ನೀಡಲು ಸುಮಾರು 15 ಶ್ರೀಗಂಧ ಯೋಧರು ಬೆಂಗಳೂರಿನಿಂದ ಪ್ರಯಾಣಿಸಿ ಭಾಗವಹಿಸಿದ್ದರು.
ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಅನಂತ ವಂದನೆಗಳು
|
| |
|
|
|
|
|
|
|
|
|